ಮೊದಲ ಮಾತು

ಪ್ರೊ. ಎಸ್. ಜಿ. ಸಿದ್ಧರಾಮಯ್ಯ
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರಭಾಷೆ ಹಾಗೂ ತಂತ್ರಜ್ಞಾನದ ಬೆಳವಣಿಗೆ ಪರಸ್ಪರ ಪೂರಕವಾದ ಸಂಗತಿಗಳು. ತಂತ್ರಜ್ಞಾನಕ್ಕೆ ಭಾಷೆಯಿಂದ ಬಲ ದೊರೆಯುತ್ತದೆ, ತಂತ್ರಜ್ಞಾನಕ್ಕೆ ತೆರೆದುಕೊಂಡಾಗ ಭಾಷೆಯ ವ್ಯಾಪ್ತಿ ಹೆಚ್ಚುತ್ತದೆ.

ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನ ಸರ್ವವ್ಯಾಪಿಯಾಗಿ ಬೆಳೆದಿರುವ ಈ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳ ಬಗ್ಗೆ ನಮ್ಮದೇ ಭಾಷೆಯಲ್ಲಿ ಮಾಹಿತಿ ಸಿಗುವಂತೆ ಮಾಡುವುದು ಹಿಂದೆಂದಿಗಿಂತ ಹೆಚ್ಚು ಅಗತ್ಯವಾಗಿದೆ. ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು, ಅದರ ಸವಲತ್ತುಗಳನ್ನು ಬಳಸಲು ಅನ್ಯಭಾಷೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯನ್ನು ಈ ಮೂಲಕ ಕೊಂಚವಾದರೂ ಕಡಿಮೆಮಾಡಬಹುದು. 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ'ದ ಪ್ರಕಟಣೆ ಹಿಂದಿರುವ ಉದ್ದೇಶವೂ ಇದೇ.

ತಂತ್ರಜ್ಞಾನದ ಪರಿಕಲ್ಪನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಈ ಪದವಿವರಣ ಕೋಶ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹಾಗೂ ಮಿಕ್ಕೆಲ್ಲ ತಂತ್ರಜ್ಞಾನ ಆಸಕ್ತರಿಗೂ ಉಪಯುಕ್ತವಾಗಲಿದೆ ಎನ್ನುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯ. ಈ ಆಶಯಕ್ಕೆ ಅನುಗುಣವಾದ ಹಲವು ಕೃತಿಗಳನ್ನು ನಾವು ಕಾಲಕಾಲಕ್ಕೆ ಪ್ರಕಟಿಸುತ್ತಲೂ ಬಂದಿದ್ದೇವೆ. ಪ್ರಾಧಿಕಾರದ ವತಿಯಿಂದ 'ಕಂಪ್ಯೂಟರ್ ಪದವಿವರಣ ಕೋಶ'ವೊಂದು ೨೦೦೨ರಷ್ಟು ಹಿಂದೆಯೇ ಪ್ರಕಟವಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಾಲಕ್ಕೆ ತಕ್ಕಂತೆ ವಿಷಯದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಜೊತೆಗೆ ಈ ಕೃತಿಯ ಪ್ರಸ್ತುತಿಯಲ್ಲೂ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇಂಗ್ಲಿಷಿನ ಪದಕ್ಕೆ ಕನ್ನಡದ ಚುಟುಕು ವಿವರಣೆಯನ್ನಷ್ಟೇ ನೀಡುವ ಬದಲು ಇಲ್ಲಿ ಪ್ರತಿ ಪದಕ್ಕೂ ಸುಮಾರು ಒಂದು ಪುಟದಷ್ಟು ಮಾಹಿತಿ ನೀಡಿರುವುದು ವಿಶೇಷ. ತಾಂತ್ರಿಕ ವಿವರಗಳಷ್ಟೇ ಅಲ್ಲದೆ ಹೆಸರಿನ ವ್ಯುತ್ಪತ್ತಿ, ಇತಿಹಾಸದಂತಹ ಮಾಹಿತಿಯನ್ನೂ ಅಗತ್ಯಬಿದ್ದ ಕಡೆಗಳಲ್ಲಿ ಸೇರಿಸಿಕೊಳ್ಳಲಾಗಿದೆ.

ತಂತ್ರಜ್ಞಾನದ ಬೆಳವಣಿಗೆಯ ವೇಗವನ್ನು ಮುದ್ರಿತ ಪುಸ್ತಕಗಳ ಪ್ರಕಟಣೆಯ ಮೂಲಕ ಸರಿಗಟ್ಟುವುದು ಕಷ್ಟ. ಹೀಗಾಗಿಯೇ ಈಗ ಪ್ರಕಟವಾಗುತ್ತಿರುವ ಪದವಿವರಣ ಕೋಶದ ಆನ್‌ಲೈನ್ ಆವೃತ್ತಿಯನ್ನೂ ರೂಪಿಸಲಾಗಿದೆ. ಹೊಸ ಪದಗಳ ವಿವರಣೆ ಸೇರಿಸುವುದನ್ನೂ ಪ್ರಕಟಿತ ಮಾಹಿತಿಯಲ್ಲಿ ಓದುಗರ ಪ್ರತಿಕ್ರಿಯೆಗೆ ಅನುಗುಣವಾಗಿ ಪರಿಷ್ಕರಣೆ ಮಾಡಿಕೊಳ್ಳುವುದನ್ನೂ ಇದು ಸುಲಭವಾಗಿಸಲಿದೆ ಎಂದು ನಾವು ಭಾವಿಸುತ್ತೇವೆ.

ಅಷ್ಟೇ ಅಲ್ಲ, ಮಾಹಿತಿಯ ಮುಕ್ತ ಪ್ರಸಾರವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಈ ಕೃತಿಯನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿಯಲ್ಲಿ ಪ್ರಕಟಿಸುತ್ತಿದೆ. ಈ ಮೂಲಕ ಇಲ್ಲಿರುವ ಎಲ್ಲ ಮಾಹಿತಿಯನ್ನೂ ವಾಣಿಜ್ಯೇತರ ಉದ್ದೇಶಗಳಿಗೆ ಮುಕ್ತವಾಗಿ ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಓದುಗರಿಗೆ ನೀಡಲಾಗುತ್ತಿದೆ.

ಇಂಥದ್ದೊಂದು ವಿಶಿಷ್ಟ ಕೃತಿಯನ್ನು ರೂಪಿಸುವಲ್ಲಿ ಪ್ರಾಧಿಕಾರದೊಡನೆ ಕೈಜೋಡಿಸಿರುವ ಇಜ್ಞಾನ ಟ್ರಸ್ಟ್ ಹಾಗೂ ಅದರ ಪದಾಧಿಕಾರಿಗಳನ್ನು, ಕೃತಿಯ ಲೇಖಕ ಹಾಗೂ ಸಂಪಾದಕರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
 

ದಯಮಾಡಿ ಗಮನಿಸಿ

ದಯಮಾಡಿ ಗಮನಿಸಿ
ಈ ತಾಣದಲ್ಲಿರುವ ಮಾಹಿತಿಯನ್ನು ಕ್ರಿಯೇಟಿವ್ ಕಾಮನ್ಸ್‌ನ CC BY-NC-ND 4.0 ಪರವಾನಗಿಯಡಿ ನೀಡಲಾಗುತ್ತಿದೆ. ಈ ಪರವಾನಗಿ ಕುರಿತ ಹೆಚ್ಚಿನ ಮಾಹಿತಿಗಾಗಿ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿ.

ಡೌನ್‌ಲೋಡ್

ಡೌನ್‌ಲೋಡ್
ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶದ ಪಿಡಿಎಫ್ ಆವೃತ್ತಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ.